ಮಧ್ಯಕಾಲೀನ ಕಲೆ -
	ರೋಮನ್ ಸಾಮ್ರಾಜ್ಯದ ಆಳ್ವಿಕೆ ಕೊನೆಗೊಂಡಂದಿನಿಂದ, ಅಂದರೆ ಸು. 400-1500ರ ಕಾಲಾವಧಿಯನ್ನು ಪಶ್ಚಿಮ ಯೂರೊಪಿನ ಮಧ್ಯಯುಗವೆಂದು ಗುರುತಿಸಲಾಗುತ್ತದೆ. ಮಧ್ಯಯುಗದ ಪೂರ್ವದಲ್ಲಿ ಪಶ್ಚಿಮ ಯೂರೊಪ್ ರೋಮನ್ ಸಾಮ್ರಾಜ್ಯದ ಒಂದು ಭಾಗವಾಗಿತ್ತು. ಅನಂತರ ಅದು ಮಧ್ಯಯುಗದಲ್ಲಿ ಅನ್ಯಾಕ್ರಮಣಕ್ಕೆ ತುತ್ತಾಗಿ ಅನೇಕ ಭಾಗಗಳಾಗಿ ಒಡೆದು ಹೋಯಿತು. ಮಧ್ಯಯುಗದಲ್ಲಿ ಪಶ್ಚಿಮ ಯೂರೊಪಿನಲ್ಲಿ ಸ್ಥಿರವಾದ ರಾಜಕೀಯ ವ್ಯವಸ್ಥೆ ಇರಲಿಲ್ಲ. ಕ್ಷೋಭೆ, ಅಸ್ಥಿರತೆ, ಅನಾಯಕತ್ವ, ಬರ್ಬರತೆ ಅತಿಯಾಗಿ ಕಾಣಿಸಿಕೊಂಡ ಕಾಲವಿದು. ಚರಿತ್ರಕಾರರು ಮಧ್ಯಯುಗವನ್ನು ಆರಂಭದ ಮಧ್ಯಯುಗ (ಸು. 400-1000). ಉನ್ನತ ಮಧ್ಯಯುಗ( ಸು.1000-1300). ಅಂತ್ಯದ ಮಧ್ಯಯುಗ (ಸು. 1300-1500) ಎಂದು ಗುರುತಿಸುತ್ತಾರೆ.

	ಆರಂಭದ ಮಧ್ಯಯುಗವನ್ನು ಕತ್ತಲೆಯುಗ (ಡಾರ್ಕ್‍ಏಜ್) ಎಂದೂ ಕರೆಯಲಾಗುತ್ತದೆ. ಈ ಕಾಲಾವಧಿಯ ಆರಂಭದಲ್ಲಿ ಜರ್ಮನ್ ಬುಡಕಟ್ಟು ಜನರು ಯೂರೊಪಿನ ಮೇಲೆ ಸತತ ದಾಳಿ ನಡೆಸಿ, ಭೀತಿ, ಅಶಾಂತಿಯನ್ನುಂಟು ಮಾಡಿದರು. ನಗರಗಳು ಅವನತಿ ಹೊಂದಿದ್ದುವು. ವ್ಯಾಪಾರ ವಾಣಿಜ್ಯ ಕುಸಿದು ಬಿತ್ತು ಹಾಗಾಗಿ ಕಲೆ ಸಾಹಿತ್ಯಗಳು ಸಾಂಸ್ಕøತಿಕ ಚಟುವಟಿಕೆಗಳು ಸ್ಥಗಿತಗೊಂಡವು. ಆದರೆ ದಾಳಿಕೋರ ಜರ್ಮನ್ ಬುಡಕಟ್ಟಿನವರು ರೋಮನ್ ರೀತಿನೀತಿಗಳನ್ನು ಅನುಸರಿಸತೊಡಗಿದ್ದರಿಂದ ಸಾಂಸ್ಕøತಿಕ ಸಂಕರದೊಂದಿಗೆ ಮಧ್ಯಕಾಲೀನ ನಾಗರಿಕೆಯ ಸಂಸ್ಕøತಿಯೊಂದು ರೂಪುತಳೆಯಲಾರಂಭಿಸಿತು. ಈ ನಾಗರಿಕತೆಯ ಬೆಳವಣಿಗೆಯಲ್ಲಿ ಕ್ರಿಶ್ಚಿಯನ್ ಧರ್ಮ ಪ್ರಧಾನ ಪಾತ್ರ ವಹಿಸಿತು. ಧರ್ಮದ ಹೆಸರಿನಲ್ಲಿ ಯುದ್ಧಗಳು ನಡೆದವು; ರಕ್ತಪಾತವಾಯಿತು ಈ ಯುದ್ಧಗಳನ್ನು ಧರ್ಮ ಯುದ್ಧಗಳು (ಕ್ರೂಸೇಡ್ಸ್) ಎಂದು ಕರೆಯಲಾಗುತ್ತದೆ. ಕ್ರಿಶ್ಚಿಯನ್ ಧರ್ಮ ಬೆಳವಣಿಗೆಯನ್ನು ಹೊಂದಿ ಜನಜೀವನವನ್ನು ನಿಯಂತ್ರಿಸುವ ಪ್ರಬಲಶಕ್ತಿಯಾಯಿತು ಮನುಷ್ಯನ ಬದುಕಿನ ಆಗುಹೋಗುಗಳನ್ನು ದೇವರು ಮತ್ತು ಧರ್ಮನಿಯಂತ್ರಿಸತೊಡಗಿದುವು. ಕೆಥಡ್ರೀಲ್ ಮತ್ತು ಮೊನಾಸ್ಟರಿಗಳು ಅಧ್ಯಯನದ ಕೇಂದ್ರಗಳಾದವು ಬಿಷಪ್‍ಗಳು, ಕ್ರೈಸ್ತಪಾದ್ರಿಗಳು ಧರ್ಮದ ನೇತಾರರಾದರು. ಸಾಮಾಜಿಕ, ಧಾರ್ಮಿಕ ಆಡಳಿತದಲ್ಲಿ ಇವರೇ ಮುಖ್ಯರಾದರು. ಚರ್ಚ್ ಪ್ರಬಲ ಸಾಂಸ್ಕøತಿಕ ಶಕ್ತಿಯಾಗಿ ರೂಪುಗೊಂಡಿತು. ಉನ್ನತ ಮಧ್ಯಯುಗದ ವೇಳೆಗೆ ಅರಾಜಕತೆ ಸ್ವಲ್ಪಮಟ್ಟಿಗೆ ನಿಯಂತ್ರಣಗೊಂಡಿತು. ಜನಜೀವನ ಸುಗಮವಾಗಿ ಸಾಗುವಂತಾಯಿತು. ನಗರ ಪಟ್ಟಣಗಳು ಬೆಳವಣಿಗೆ ಹೊಂದಿದುವು. ಇದರೊಂದಿಗೆ ಮಧ್ಯಮವರ್ಗದ ಜನವರ್ಗವೊಂದು ಈ ಕಾಲದಲ್ಲಿ ಸೃಷ್ಟಿಯಾಯಿತು. ಇವರು ಕಲೆ, ಸಾಹಿತ್ಯ, ಸಂಸ್ಕøತಿಯ ಬೆಳೆವಣಿಗೆಗೆ ಕಾರಣರಾದರು. ಚಾರ್ಟವೆರ್ಸ್, ರೀಮ್ಸ್, ಅಮಿಯನ್ಸ್, ಪ್ಯಾರಿಸ್ ಮುಂತಾದ ನಗರಗಳಲ್ಲಿ ಮಧ್ಯಯುಗದ ಚರ್ಚುಗಳನ್ನು ಈಗಲೂ ಕಾಣಬಹುದಾಗಿದೆ. 

	ಈ ಕಾಲದ ಕಲೆಯ ಮೇಲೆ ಕ್ರಿಶ್ಚಿಯನ್ ಧರ್ಮದ ಪ್ರಭಾವ ಬಹುವಾಗಿ ಆಯಿತು. ನೂರಾರು ಧಾರ್ಮಿಕ ಕಟ್ಟಡಗಳು ನಿರ್ಮಾಣಗೊಂಡವು. ಪ್ಯಾರಿಸ್‍ನಲ್ಲಿರುವ ನೋಟ್ರೆಡಾಮ್ ಕೆಥಡ್ರೀಲ್ ಪೂರ್ವಗಾಥಿಕ್ ವಾಸ್ತುಶಿಲ್ಪದ ಅತ್ಯುತ್ತಮ ಮಾದರಿ ಎನ್ನಬಹುದು. ಇದರ ನಿರ್ಮಾಣ ಕಾರ್ಯ 1163ರಲ್ಲಿ ಆರಂಭವಾಗಿ 150 ವರ್ಷಗಳ ಅನಂತರ ಪೂರ್ಣಗೊಂಡಿತು. ಉತ್ತರ ಫ್ರಾನ್ಸ್‍ನ ರೀಮ್ಸ್‍ವಾಗಿ 150 ವರ್ಷಗಳ ಅನಂತರ ಪೂರ್ಣಗೊಂಡಿತು. ಉತ್ತರ ಫ್ರಾನ್ಸ್‍ನ ರೀಮ್ಸ್‍ನಲ್ಲಿರುವ ಕೆಥಡ್ರೀಲ್ ಕೂಡ ಅತ್ಯಂತ ಸುಂದರ ಕಟ್ಟಡ. ಇದರ ನಿರ್ಮಾಣ 1211ರಲ್ಲಿ ಆರಂಭಗೊಂಡು 1430ರಲ್ಲಿ ಕೊನೆಗೊಂಡಿತು. ಬಿಜಾನ್‍ಟೀಯನ್ ಸಾಮ್ರಾಜ್ಯ (ನೋಡಿ- ಬಿeóÁಟೀಯನ್-ಸಾಮ್ರಾಜ್ಯ) ಇಂಥ ಕಲೆಯ ಸೃಷ್ಟಿಗೆ ಆಸರೆಯೊದಗಿಸಿತು. ಬಿಜಾನ್ ಟೀಯನ್ ಮೊಸಾಯಿಕ್ ಚಿತ್ರಕಲೆ, ಬಿಜಾನ್‍ಟೀಯನ್ ವರ್ಣಸಿಕ್ತ ಗಾಜುಕಲೆ ಇಲ್ಲಿ ರೂಪುಗೊಂಡವು. ಇದೇ ಕಲಾಪ್ರೇರಣೆಯ ಅಂಗವಾಗಿ ಪುಸ್ತಕ ತಯಾರಿಕೆ, ಮುಖ್ಯವಾಗಿ ಬೈಬಲ್‍ನಂಥ ಧಾರ್ಮಿಕ ಗ್ರಂಥಗಳ ಕೈಮುದ್ರಣ, ಲಘುಚಿತ್ರಣ ಕೆತ್ತುವಳಿ ಇತ್ಯಾದಿಗಳಲ್ಲಿ ಮಧ್ಯಯುಗದ ಕಲಾಕಾರನ ಪ್ರಯತ್ನಗಳು ವಿಶೇಷ ಗಮನ ಸೆಳೆಯುತ್ತವೆ. ಕಲೆಯಲ್ಲಿ ಕ್ರೈಸ್ತ ಜೀವನದ ವಿವರಗಳು, ಧಾರ್ಮಿಕ ವಿಷಯಗಳು ಮೇಲುಗೈ ಸಾಧಿಸಿದುವು. ಬೈಬಲ್‍ನ ಅನೇಕ ಕಥೆಗಳನ್ನು ಕಲಾಮಾಧ್ಯಮದ ಮೂಲಕ ನಿರೂಪಿಸುವ ಪ್ರವೃತ್ತಿ ಬೆಳೆಯಿತು. ವಿಶ್ವವಿದ್ಯಾಲಯಗಳು ಸ್ಥಾಪನೆಗೊಂಡು ಕಾನೂನು, ವೈದ್ಯ, ಸಾಹಿತ್ಯ, ಕಲೆ ಮೊದಲಾದ ಕ್ಷೇತ್ರಗಳಲ್ಲಿ ಶಿಕ್ಷಣ ದೊರೆಯಲಾರಂಭವಾಯಿತು. ಅರೇಬಿಕ್ ಹಾಗೂ ಗ್ರೀಕ್‍ನಿಂದ ಅನೇಕ ಬರೆಹಗಳು ಲ್ಯಾಟಿನ್ ಭಾಷೆಗೆ ಅನುವಾದಗೊಂಡವು. ಪೀಟರ್ ಅಬೆಲಾರ್ಡ್, ಆಲ್ಬರ್ಟಸ್, ಮ್ಯಾಗ್ನಸ್, ತಾಮಸ್ ಅಕ್ವಿನಸ್ ಮೊದಲಾದವರು ಈ ಕಾಲದ ಪ್ರಮುಖ ಬರಹಗಾರರು ಹಾಗೂ ಚಿಂತಕರು. ಈ ಕಾಲದಲ್ಲಿ ಸ್ಕೊಲಾಸ್ಟಿಸಿಸಮ್ (ಸಂಪ್ರದಾಯದಲ್ಲಿ ನಂಬಿಕೆಯುಳ್ಳ ಮಾರ್ಗ) ಎಂಬ ಪಂಥ ಹುಟ್ಟಿಕೊಂಡಿತು. ಉನ್ನತ ಮಧ್ಯಯುಗದ ಈ ಎಲ್ಲ ಚಟುವಟಿಕೆಗಳು ಅಂತ್ಯಮಧ್ಯಯುಗದ ಅಥವಾ ಪುನರುತ್ಥಾನ ಯುಗದ ಬೆಳೆವಣಿಗೆಗೆ ಹಾದಿಮಾಡಿಕೊಟ್ಟವು.

	ಅಂತ್ಯಮಧ್ಯಯುಗದಲ್ಲಿ ರಾಜಕೀಯವಾಗಿ ಆ ತನಕ ಪ್ರಬಲವಾಗಿದ್ದ ಫ್ಯೂಡಲ್ ವ್ಯವಸ್ಥೆ ಕುಸಿದುಬಿತ್ತು. ಸಾವಿರ ವರ್ಷಗಳಿಗೂ ಹೆಚ್ಚುಕಾಲ ಭದ್ರವಾಗಿದ್ದ ಯೂರೊಪಿನ ಸಂಪ್ರದಾಯದ ಕೋಟೆ ಛಿದ್ರವಾದದ್ದು ಈ ಕಾಲದ ಮಹತ್ತ್ವದ ಸಂಗತಿ. ಧರ್ಮಕ್ಕಿಂತ ಮಾನವೀಯ ಭಾವನೆಗಳು ಆಸಕ್ತಿಗಳು ಮುಖ್ಯವಾದುವು. ಮನುಷ್ಯ ಮತ್ತು ಜಗತ್ತು-ಇವೆರಡರ ನಡುವಣ ಸಂಬಂಧವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಗಳು ನಡೆಯತೊಡಗಿದವು. ಕುತೂಹಲ, ಸಾಹಸ, ಅನ್ವೇಷಣೆ ಈ ಕಾಲದ ಯುಗಧರ್ಮವೆನಿಸಿತು. ಮಾನವತಾವಾದದ (ಹ್ಯೂಮನಿಸಮ್) ಉಗಮದೊಡನೆ ಕಲೆ, ಸಾಹಿತ್ಯಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಕಾಣಿಸಿಕೊಳ್ಳತೊಡಗಿದುವು. ಕೇವಲ ಧಾರ್ಮಿಕ ಕಟ್ಟಡಗಳ ನಿರ್ಮಾಣದಲ್ಲಿ ಆಸಕ್ತರಾಗಿದ್ದ ವಾಸ್ತುಶಿಲ್ಪಿಗಳು ಹೆಚ್ಚು ಹೆಚ್ಚಾಗಿ ಲೌಕಿಕ ಕಟ್ಟಡಗಳ ರಚನೆ ಹಾಗೂ ನಿರ್ಮಾಣದಲ್ಲಿ ತೊಡಗಿದರು. ಕ್ರೈಸ್ತಧರ್ಮೀಯ ವಸ್ತುವಿಷಯಗಳನ್ನು ಚಿತ್ರಿಸುತ್ತಿದ್ದ, ಶಿಲ್ಪಿಸುತ್ತಿದ್ದ ಚಿತ್ರಕಾರರು ಮತ್ತು ಶಿಲ್ಪಿಗಳು ಮನುಷ್ಯ ಹಾಗೂ ಅವನಿಗೆ ಸಂಬಂಧಿಸಿದ ಲೌಕಿಕ ಜಗತ್ತನ್ನು ಕಲಾಮಾಧ್ಯಮದಲ್ಲಿ ವೈಭವೀಕರಿಸತೊಡಗಿದರು. ಇಟಾಲಿಯನ್, ಲ್ಯಾಟನ್ ಭಾಷೆಗಳಲ್ಲಿ ಸೃಜನೆಗೊಳ್ಳುತ್ತಿದ್ದ ಸಾಹಿತ್ಯ ಸ್ಥಳೀಯ ಭಾಷೆಗಳಲ್ಲಿ ಸೃಷ್ಟಿಗೊಳ್ಳತೊಡಗಿದ್ದರಿಂದ ಜ್ಞಾನ ಜನಸಾಮಾನ್ಯರಿಗೂ ತಲುಪತೊಡಗಿತು. ಇದರಿಂದಾಗಿ ಇಡೀ ಯೂರೋಪಿನ ದೃಷ್ಟಿಧೋರಣೆಗಳೇ ಬದಲಾಗಿ ಹೊಸ ಮನ್ವಂತರಕ್ಕೆ ಹಾದಿಯಾಯಿತು.	(ನೋಡಿ- ಪುನರುಜ್ಜೀವನ) 
 (ವಿ.ಎಸ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ